Oct 20, 2013

ಅವರು ಇವರು


ಇವರಿಗೂ ಒಬ್ಬನೆ ಮಗ
ಅವರಿಗೂ ಒಬ್ಬನೆ ಮಗ

ಇವರ ಮಗ ಗಾಳಿಪಟ ಹಾರಿಸುತ್ತನೆ
ತಾನೂ ಹಾರಲೆತ್ನಿಸಿ ಬೀಳುತ್ತಾನೆ
ಅವರ ಮಗ ಕಾಣೆಯಾಗಿ ವಾರಗಳೆ ಆಯಿತು
ಅವ ಹಾರುವುದ ಕಲಿತಿದ್ದ ಆದರೆ ರೆಕ್ಕೆ ಇನ್ನೂ ಬಲಿತಿರಲಿಲ್ಲ

ಇವರ ಮಗ ಪಟ್ಟಣದವ
ಅವರಮಗ ಹಳ್ಳಿಗ

ಇವರು ಸಿರಿವಂತರು
ಅವರು ಬಡವರು

ಇವರು ಮಾತು ಬಲ್ಲವರು
ಅವರು ಹಾಡಬಲ್ಲವರು

ಇವರ ಕತ್ತಲಿ ಚಿನ್ನದ ಸರ
ಅವರೊ ಬೆತ್ತಲೆ ಬದುಕುವವರು

ಇವರ ವಾಸ ಮಹಲಿನಲ್ಲಿ
ಅವರೊ ಮಳೆಯಲಿ ನೆಂದು ಬಿಸಿಲಲಿ ಒಣಗುವವರು

ಇವರ ಬಯಕೆಗೆ ಕೊನೆಯಿಲ್ಲ
ಅವರ ಬದುಕಲಿ ಬಯಕೆಯೆ ಇಲ್ಲ

ಇವರ ಮಗನ ಖುಷಿಗೆ ಅವರ ಮಗನ ತಂದಿಹರು
ಇವರ ಮಗನೊ ಮಹಡಿಯ ಮೇಲೆ ಗಾಳಿಪಟ ಹಾರಿಸುತಿರುವನು
ಅವರ ಮಗನೊ ರೆಕ್ಕೆ ಇದ್ದೂ ಹಾರಲಾರನು

ಇವರ ಮಗನನು ಕೂಗಿ ಅಮ್ಮ ಕರೆದಿಹಳು 'ಬಾ ತಿನ್ನು'
ಅವರ ಮಗನನು ಹುಡುಕುತ್ತ ಅಮ್ಮ ಕಾಡಲಿ ಕೂಗುವಳು

ಇವರ ಮಗನೊ ಮಹಡಿಯ ಮೇಲೆ ಗಾಳಿಪಟ ಹಾರಿಸುತಿರುವನು
ಅವರ ಮಗನೊ ರೆಕ್ಕೆ ಇದ್ದೂ ಹಾರಲಾರನು
ಪಂಜರದಲ್ಲಿಹನು