Dec 4, 2013

ಓಟ

ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನಾನೊಂದು ಟ್ರ್ಯಾಕಿನ ಮೇಲಿದ್ದೆ
ಎಲ್ಲರೂ ಓಡುತ್ತಿರಲು ನಾನೂ ಓಡಿದೆ
ದಾರಿಯಲ್ಲಿ ಒಬ್ಬೊಬ್ಬರೆ ಕುಸಿದು ಬಿದ್ದರು
ಹಾಗೇ ಹೊಸಬರು ಹುಟ್ಟಿಕೊಂಡರು
ನೋಡುತ್ತಲೇ ಓಡತೊಡಗಿದರು
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.

ಅದೊಂದು ಗುಡ್ಡಗಾಡು ಓಟ.
ಸುತ್ತಲ ಸೌಂಧರ್ಯ ನಾನು ಸವಿಯಲಿಲ್ಲ.
ಬದಿಗೆ ಇದ್ದವರೊಡನೆ ಮಾತನಾಡಲು
ನನಗೆ ಸಮಯವೂ ಇರಲಿಲ್ಲ.

ನೋಡುತ್ತಲೆ ಕುಸಿದಳು ನನ್ನ ಹೆತ್ತವಳು.
ಓಡುತ್ತಲೆ ಕಣ್ಮರೆಯಾದರು ಒಡನಾಡಿಗಳು.
ಹುಟ್ಟುತಿದ್ದರು ಹೊಸಬರು ಕುಸಿಯುತಿದ್ದರು ಹಳಬರು.
ನಾನು ಓಡುತ್ತಲೇ ಇದ್ದೆ ಎಲ್ಲರೂ ಓಡುತ್ತಿರಲು.

ಅಂದು ನಾಹಾದ ದಾರಿಯಲ್ಲಿ
ಹಸಿರು ತುಂಬಿತ್ತು.
ತುಂತುರು ಉದುರುತಿತ್ತು.
ನಿಂತು ವಿಶ್ರಮಿಸಲಿಲ್ಲ.
ಹಣ್ಣು ಬಿದ್ದಿತ್ತು ಹೆಕ್ಕಿತಿನ್ನಲಿಲ್ಲ.
ಎಲ್ಲರೂ ನನ್ನೊಡನೆ ಇದ್ದರು
ಓಡುವುದ ಬಿಟ್ಟು ನಡೆಯ ಬಹುದಿತ್ತು
ನಡೆಯುತ್ತ ಹರಟ ಬಹುದಿತ್ತು.
ಅರಿವಿಗೇ ಬರಲಿಲ್ಲ.

ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನನ್ನವರು ನನ್ನ ಜೊತೆಗಿದ್ದರು
ಓಟನಿಲ್ಲಿಸಿ ನಡೆದು ಬರಬಹುದಿತ್ತು.
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.

[ಆಧುನಿಕ ಜಗತ್ತಿನಲ್ಲಿ ಯಶಸ್ಸಿನ ಬೆನ್ನಹತ್ತಿರುವ ನಮಗೆ ಆಪ್ತರ ಪ್ರೀತಿ ವಾತ್ಸಲ್ಯ ಎಷ್ಟೋಬಾರಿ ಗೋಚರಿಸುವುದಿಲ್ಲ.
ಅಮ್ಮ ಅಪ್ಪ ಅಜ್ಜಿ ಅಜ್ಜ ಗೆಳೆಯ ಗೆಳತಿಯರೊಡನೆ ಪ್ರೀತಿಯಿಂದ ಸಮಯ ಕಳೆಯಲು ನಮಗೆ ಸಾದ್ಯವಾಗುವುದಿಲ್ಲ.
ಕೊನೆಗೆ ಯಶಸ್ಸು ದಕ್ಕಿದರೂ, ಸಂತಸ ಹಂಚಿಕೊಳ್ಳಲು ಎಷ್ಟೋಬಾರಿ ಕಾರಣಕರ್ತರೆ ಬದುಕಿರುವುದಿಲ್ಲ.

ಈ ಗಳಿಗೆ ನೀವು ಟ್ರ್ಯಾಕಿನಲ್ಲಿ ಇದ್ದ ಪಕ್ಷ ಓಟನಿಲ್ಲಿಸಿ ನಿಮ್ಮವರೊಡನೆ ನೆಡೆಯುವುದು ಉತ್ತಮ.]

Dec 3, 2013

ನಮ್ಮೊಂದಿಗೆ- ಮೆಟ್ರೋ ಅಳಿಲು.

ನಾನು ಹುಟ್ಟಿದ್ದು ಇವತ್ತಿನ ಈ ಮೆಟ್ರೋ ಪಟ್ಟಣದಲ್ಲಿ.
ನನ್ನ ಮುತ್ತಾತಂದಿರೂ ಇಲ್ಲಿಯವರೆ ಆದರೆ ಅಂದು ಇದು ಗೊಂಡಾರಣ್ಯ.
ಜರಿ ತೊರೆ ಜೀವ ಜಂಗುಲ.
ತಿಂದಸ್ಟೂ ಮುಗಿಯದ ಕಾಡ ಹಣ್ಣು
ಕುಡಿದಸ್ಟು ನೀರು ಎಲ್ಲೆಲ್ಲೂ ಹಸಿರು
ಅವೆಲ್ಲ ನನಗೆ ಕತೆ ಮಾತ್ರ
ನನ್ನ ಬಾಲ್ಯದಲ್ಲಿ ಕುಡಿಯಲು ನೀರಾದರು ಸಿಗುತಿತ್ತು.
ಸದ್ಯಕ್ಕೆ ನೀರು ಕಾಣದೆ ದಿನಗಳೆ ಆಗಿವೆ
ನನ್ನ ಜೊತೆಗಾರರು ಬಾಯಾರಿ ಕಣ್ಣ ಮುಚ್ಚಿದರು.
ಮನೆ ಒಡತಿ ನಳವನ್ನ ಮರೆತು ಮುಚ್ಚದಿದ್ದರೆ ಬಾಯಿಗೆ ನೀರು.
ಅಂಗಡಿಯಲ್ಲಿ ಕಾಣುವ ಬಾಟಲ್ ನೀರಂತೂ ನಮ್ಮ ಹಗಲುಗನಸು.
ಸರ್ಕಾರ ಈ ಬಗ್ಗೆ ಚಿಂತನೆನಡೆಸಿ ನಮ್ಮಗಳ ಬದುಕನ್ನ ಉಳಿಸ ಬೇಕಾಗಿ ಇಲ್ಲಿ ನಮ್ಮ ವಿನಂತಿ.
ಕೊನೆಪಕ್ಷ ಮೆಟ್ರೋ ಜನ ಒಂದು ಬಟ್ಟಲು ನೀರನ್ನಾದರು ಹೊರಗಿಡಬಹುದೆಂದು ಹಾರೈಸುವ.

ಅಳಿದುಳಿದ ಮೆಟ್ರೋ ಜೀವಿಗಳು.

 


Dec 2, 2013

ಮಾಲ್ಗುಡಿ ಡೇಸ್ - ಸ್ವಾಮಿ ಮತ್ತು ಫ್ರೆಂಡ್ಸ್..

ಎಷ್ಟು ವಿಪರ್ಯಾಸ ನೋಡಿ ಆಡುತಲ್ಲೇ ಬೆಳೆದು ದೊಡ್ಡವರಾದ ನಾವು  ಬಂದ ದಾರಿಯನ್ನೇ ಮರೆತಿದ್ದೇವೆ. ಅಷ್ಟೇ ಅಲ್ಲ ನಮ್ಮ ಬಳಿ ಈಗ ಸಮಯವೂ ಇಲ್ಲ, ನೆಮ್ಮದಿಯೂ ಇಲ್ಲ, ಬದುಕೊಂದು ಓಟವಾಗಿ ಮಾರ್ಪಟ್ಟಿದೆ. ಆದರೆ ಪ್ರತಿಯೊಬ್ಬರಲ್ಲೂ ಒಬ್ಬ ಮಗು ಅಡಗಿದ್ದಾನೆ ಎಂಬುದು ನಿಜ. ಮಾಲ್ಗುಡಿ ಆ ನಿಮ್ಮ ಸುಪ್ತ ಮಗುವನ್ನು ಎಚ್ಚರಿಸಬಲ್ಲುದು.

ಮನೆ ಮಾತಾದ ಈ ಮಾಲ್ಗುಡಿ ಆರ್. ಕೆ ನಾರಾಯಣ ಅವರು ತಮ್ಮ ಕಾದಂಬರಿಯಲ್ಲಿ ನಮ್ಮೆಲ್ಲರಿಗೆ ಚಿತ್ರಿಸಿದ ಒಂದು ಸುಂದರ ಹಳ್ಳಿ. ನಕ್ಷೆಯಲ್ಲಿ ಕಾಣದ ಈ  ಮಾಲ್ಗುಡಿ ನಮ್ಮೊಳಗೆ ಅಡಗಿರುವುದು. ನಮ್ಮ ಬದುಕನ್ನೇ, ನಮ್ಮ ಬಾಲ್ಯವನ್ನೇ ತೆರೆದಿಡುವುದು. ಈ ಕಾದಂಬರಿಯನ್ನು ನಮ್ಮ ಮೆಚ್ಚಿನ ಶಂಕರ್ ನಾಗ್ 'ಮಾಲ್ಗುಡಿ ಡೇಸ್' ಅನ್ನುವ ದಾರವಾಹಿಯನ್ನಾಗಿ ನಿರ್ಧೇಶಿಸಿ ನಿರ್ಮಿಸಿದ್ದರು, ಹಿಂದಿಯಲ್ಲಿ ಹೊರಬಂದ ಈ 'ಮಾಲ್ಗುಡಿ ಡೇಸ್' ನೋಡದವರೆ ಇಲ್ಲ ಎನ್ನಬಹುದು!  ಆದರೆ ನಾನಂತು ನೋಡಿರಲಿಲ್ಲ! ನೋಡಬೇಕೆನ್ನುವ ಆಸೆ ನನ್ನಲಿದ್ದ ಕಾರಣ ನೋಡದೆ ಬಿಡಲಿಲ್ಲ. 

ನನಗೆ ಈ ಕತೆಯು ನ್ಯಾಚುರಲ್ ಆಗಿ ಕಂಡು ಬಂತು. ಈ ದಾರವಾಹಿಯನ್ನು ನೋಡುತ್ತಾ ಹೋದಂತೆ ನೀವೊಂದು ಬೇರೆ ಜಗತ್ತಿಗೆ ಹೋದ ಅನುಬವ ಉಂಟಾಗುತ್ತದೆ. ಆ ಜಗತ್ತು ಮತ್ತಾವುದು ಅಲ್ಲ ನಿಮ್ಮ ಬಾಲ್ಯದ ದಿನಗಳೆ. ಅಮ್ಮ-ಅಪ್ಪ ಅಜ್ಜಿ-ಅಜ್ಜನ ನೆನಪುಗಳು, ಶಾಲೆಯ ಮಾಸ್ಟ್ರ ಬೆತ್ತದ ಬಿಸಿಯ ಅನುಬವ, ಬಾಲ್ಯದ ಪುಟ್ಟ ಸಮಸ್ಯೆಗಳು, ಅಂದಿನ ನಮ್ಮ ಕಲ್ಪನಾಲೋಕ ಇವುಗಳನ್ನೆಲ್ಲ ನೆನಪಿಸಬಲ್ಲ ಚಿತ್ರ ಮಾಲ್ಗುಡಿ.

 'ಸ್ವಾಮಿ ಮತ್ತು ಫ್ರೆಂಡ್ಸ್' ಇದರ ಮೊದಲ ಕಂತು.  ಕತೆಯನ್ನಂತೂ  ನಾನಿಲ್ಲಿ ಹೇಳಹೊರಟಿಲ್ಲ. ಏಕೆಂದರೆ ನೀವು ನೋಡಲೇ ಬೇಕಾದ ದಾರವಾಹಿ ಮಾಲ್ಗುಡಿ!. ನೋಡಿದವರು ಇನ್ನೋಮ್ಮೆ ನೋಡಿ ಬಿಡಿ, ಯುಟ್ಯೂಬ್ ವಿಡಿಯೊ ಕೊಂಡಿಯನ್ನು ಕೊನೆಯಲ್ಲಿ ಸೇರಿಸುತ್ತೇನೆ. ಶಂಕರ್ನಾಗ್ ಅವರ ನಿರ್ದೇಶನದ ವಿಶೇಷ, ಅವರ ಕಾದಂಬರಿಯ ಒಳನೋಟ, ಅನುಗುಣವಾಗಿ ಚಿತ್ರಿಸಿರುವ ಸನ್ನಿವೇಷಗಳು ಅಮೋಗವಾಗಿವೆ. 'ಸ್ವಾಮಿ ಅಂಡ್ ಫ್ರೆಂಡ್ಸ್' ನಿಮ್ಮನ್ನ ನಿಮ್ಮ ಬಾಲ್ಯಕ್ಕೆ ಒಯ್ಯುವುದಂತು ನಿಜ. ಬಾಲ್ಯದ ಆಸೆಗಳು, ಕೌತುಕಗಳು, ಭಯಗಳನ್ನೊಳಗೊಂಡು, ಗೆಳೆತನ, ಅಜ್ಜಿ ತಾತನ ನೆನಪುಗಳನ್ನು ನಿಮ್ಮ ಕಣ್ಮುಂದೆ ತರಬಲ್ಲುದು.

ಬಾಲ್ಯ ನಗು ಅಳುಗಳ ಸಮ್ಮಿಲನ.
ಒಂದು ಗಳಿಗೆಯ ಕುಸ್ತಿ ಮತ್ತೆ ದೋಸ್ತಿ..
ತಿಳಿಯದ ಪ್ರಪಂಚ..
ಕುತೂಹಲ..
ಇವುಗಳನ್ನೆಲ್ಲ 'ಶಂಕರ್ನಾಗ್' ಸೂಕ್ಷ್ಮವಾಗಿ ಗಮನಿಸಿ ಕತೆಗೆ ಜೀವತುಂಬಿದ್ದಾರೆ.

'ಸ್ವಾಮಿ' ಆಗಿ ಕಾಣಿಸಿಕೊಳ್ಳುವ ಪುಟ್ಟ ಹುಡುಗ ಮಾಸ್ಟರ್ ಮಂಜುವಿನ ನಟನೆ ಪರ್ಫೆಕ್ಟ್! ಚಿಕ್ಕವಯಸ್ಸಿನಲ್ಲಿ ಅಂತಹ ಕಲೆ ಅದ್ಬುತ.
ಹಳಿಯ ಬದಿಯಲ್ಲಿ ಅಳುತ್ತಾ ಕೂತಿದ್ದ ಸ್ವಾಮಿ ರೈಲು ಬಂದೊಡನೆ ಕಣ್ಣೊರೆಸುತ್ತಾ ತನ್ನ ಗೆಳೆಯನೊಡನೆ  ಸ್ವಾಮೀ.... ಎಂದು ಓಡುವ ಪರಿ ಕಣ್ಣ ಕಟ್ಟಿದೆ..