Feb 16, 2014

ಅಂಚಿನ ಜೀವನ

ಕತ್ತಲು ಬೆಳಕುಗಳ ನಡುವೆ ಜೀವನ
ದುಖಃ ಸುಖಗಳ ಸಮ್ಮಿಶ್ರಣ
ಸಾವು ಬದುಕುಗಳ ನಡುವಿನ ಪಯಣ
ಮಿಂಚಿ ಮರೆಯಾಗುವ ಯೌವನ
ಭೋಗ ಯೋಗಗಳ ಅಂಚಿನ ಸಮನ್ವಯ
ಪ್ರಕೃತಿಗೊಂದಿಹ ಮೈ ಮನ
ಎಚ್ಚರು ನಿದ್ರೆಗಳಲಿ ಹಂಚುತ ಪ್ರತಿದಿನ
ಸಾಗುತ ಬಹುದೂರದ ಪಯಣ

ನನ್ನವರೆನ್ನುವ ಬೆಚ್ಚನೆ ಭಾವನೆ
ತಿಳಿಯದೆ ನಿರ್ಮಿತ ಭಾಂದವ್ಯದ ಬೆಸುಗೆ
ಕತ್ತಲೆ ಅಂಚಿನ ಬೆಳಗಿನ ಕಿರುನಗೆ
ಬೆಳಕೊಳು ಹೊಕ್ಕಿಹ ನೆರಳುಗತ್ತಲೆ
ನಮ್ಮೊಳಗಿಹ ನಿಮ್ಮನು ಅರಿಯದೆ
ಕತ್ತಲು ಬೆಳಕೊಳು ನಡೆಸುತ ಜೀವನ
ದುಖಃ ಸುಖಗಳ ಸಮ್ಮಿಲನ

Feb 10, 2014

ಜಾಮಿತಿ ಬಲ್ಲವನೆ!

ಅಗಣಿತ ಲೋಕದ ಸೃಷ್ಠಿಯ ಒಡೆಯನು
ಸೂತ್ರಗಳಿಟ್ಟಿಹನೆ!
ಚಿತ್ರ ವಿಚಿತ್ರವ ರೂಪಿಸುವಾತನು
ಜಾಮಿತಿ ಬಲ್ಲವನೆ!
ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ
ಕಲೆಯನು ಕೆತ್ತಿಹನೆ!
ಸೂಕ್ಷ್ಮಾನಂತಗಳೊಳ ಹೊರ
ವಿಶ್ವದ ಕೆತ್ತನೆ ನಡೆಸಿಹನೆ!

ಶಿಲ್ಪಿಯು ತರ್ಕಕೆ ಸಿಗುವವನೆ!
ಸೃಷ್ಟಿಯ ಬುದ್ದಿಗೆ ನಿಲುಕುವನೆ!
ಸೃಷ್ಟಿಯ ಪ್ರಜ್ಞೆಯೆ ತಾನಾಗಿರುವನೆ!