ಕಾಡು,ಪ್ರಾಣಿ,ಪಕ್ಷಿಗಳು.... Computerಗಳು, Artificial Intelligenceಗಳು.. ಹಾರುವ ತಟ್ಟೆ-ಲೋಟಗಳು ಇನ್ನೂ ಏನೇನೊ....!! ತೋಚಿದ್ದು ಗೀಚಿದ್ದು.
Jun 15, 2012
ಮಗು ಮರೆಯಿತು
ಮಗುವೊಂದು ಬದುಕಿರಲು ಏಕಾಂಗಿಯಾಗಿ
ಜಗದರಿವು ತನಗಾಗಿ ಏಕಾಂತ ಭಯವಾಗಿ
ತಾನಾರು ತನಗಾರು ಸಂಶಯಗಳ ಸೆರೆಯಾಗಿ
ತನ್ನ ತಾನೆ ಸೃಷ್ಟಿಸಿ ನಗತೊಡಗಿತು
ನಗು ನಗುತ ಮಗು ಮನದಿ
ಮಾಯೆಯೊಳಗೂಡಿ ಜಗವ ನಿರ್ಮಿಸಿ
ಮಗು ಮರೆಯಿತು
ಮೂಲವನೆ ತಾ ಮರೆತು ಸೃಷ್ಟಿಯೊಳು ತಾ ಬೆರೆತು
ಗಾಡ ನಿದ್ರೆಗೆ ಜಾರಿ ಜಗದೊಳು ಜಾಗೃತವಾಗಿ
ಕನಸಿನೊಳಗಣ ಕನಸಲ್ಲಿ ಜೀವನ ಬೆಳೆಸಿತು
ಖಗದಲ್ಲಿ ಮಿಗವಾಗಿ ಭುವಿಯೊಳು ಮೃಗವಾಗಿ
ಹಾವಾಗಿ ಹೊವಾಗಿ ಕ್ರಿಮಿ ಕೀಟವು ತಾನಾಗಿ
ಹರಿದಾಡಿ ಈಜಾಡಿ ಹಾರಾಡಿ
ಜಗವೆಲ್ಲ ಜಾಲಾಡಿ ಮಗು ಮರೆಯಿತು
ನೂರು ರೂಪಗಳ ತಾಳಿ
ಬಂಧ ಬಾಂಧವ್ಯಗಳ ಹೂಡಿ
ಕಾಮ ಪ್ರೇಮಗಳ ಬೀಜ ಬಿತ್ತಿ
ಚಿಗುರೊಡೆಯಿತು ಮರವಾಯಿತು
ಮಗು ಮರೆಯಿತು
ತನ್ನ ತಾನೇ ಸೇವಿಸಿ ಹಸಿವ ನೀಗಿಸಿ
ಕುಣಿದಾಡಿ ಕೆಲಗಳಿಗೆ
ದುಃಖಿಸಿ ಮರುಗಳಿಗೆ
ಜಗವೆಂಬ ನಾಟಕ ರಂಗದಲಿ
ಬಂದ ದಾರಿಯನೆ ತಾ ಮರೆತು
ಮಗು ಬೆರೆಯಿತು
ಮಗು ಮರೆಯಿತು
Subscribe to:
Post Comments (Atom)
No comments:
Post a Comment