Jul 12, 2012

ಜೀವ ವೈವಿದ್ಯ ಮತ್ತು ಧಾರ್ಮಿಕತೆ

 ಸಂಪ್ರದಾಯಿಕವಾಗಿ ಬಂದ ಪರಿಸರ ಜ್ಞಾನ (Traditional Ecological Knowledge, TEK) ಧರ್ಮ, ನೀತಿ, ಆತ್ಮ ಅಥವಾ ಚೈತನ್ಯದ ಗಟ್ಟಿಯಾದ ತಳಹದಿಯನ್ನು ಹೊಂದಿದೆ. ಇದು ತಲೆ ತಲಾಂತರದಿಂದ ಉಳಿದು ಬಂದಿದ್ದು ಯಾವುದೇ ಪುಸ್ತಕ ರೂಪವನ್ನು ತಳೆದು ದಾಖಲೆಗೊಳ್ಳದೆ ಇಂದಿಗೂ ಹಿರಿಯರಿಂದ ಕಿರಿಯರಿಗೆ ನಂಬಿಕೆ, ಭಯ, ಭಕ್ತಿಗಳೊಂದಿಗೆ ದೈವ ಶಕ್ತಿ, ಬೂತಾರಾಧನೆಗಳನ್ನೊಳಗೊಂಡು ಪೋಷಿಸಲ್ಪಡುತ್ತಿದೆ.

ಪ್ರಪಂಚದ ಅನೇಕ ಭಾಗಗಳಲ್ಲಿನ ಬುಡಕಟ್ಟು ಜನಾಂಗದವರು, ಹಳ್ಳಿಗಳಲ್ಲಿನ ಸ್ಥಳೀಯರು ತಮ್ಮದೇಯಾದ ಸಂಸ್ಕೃತಿ ಮತ್ತು ಆಚರಣೆಗಳಿಂದ ಪ್ರಕೃತಿ ಸಮತೋಲನವನ್ನು ಕಾಪಾಡಿಕೊಂಡು ಬಂದಿದ್ದಾರೆ ಇದನ್ನು ಸಂಸ್ಕೃತಿ ರಕ್ಷಿತ ಪ್ರಕೃತಿ (Culture linked ecosystem management) ಎನ್ನಬಹುದು. ಇದರಿಂದಾಗಿ ಪವಿತ್ರ ಪ್ರಭೇದಗಳು (Sacred species), ದೇವರ ಕಾಡುಗಳು (Sacred groves), ಪವಿತ್ರ ಸ್ಥಳಗಳು (Sacred landscapes) ಎಂಬ ವಿಚಾರ ಬಂದಿದ್ದು ಇಂದಿಗೂ ಜೀವಂತವಾಗಿದೆ. ಅಂತರಾಷ್ಟ್ರೀಯ ಎಥ್ನೋ ಬಯೋಲಜಿ ಸಂಸ್ಥೆಯು (International society of ethno biology) ಸಂಸ್ಕೃತಿ ಮತ್ತು ಜೀವ ವೈವಿಧ್ಯದ ನಡುವಿನ ಸಂಬಂಧಗಳ ಬಗ್ಗೆ ಗಂಭೀರವಾದ ಅಧ್ಯಯನ ನೆಡೆಸಿದೆ.

ಪವಿತ್ರ ಪ್ರಭೇದಗಳು (Sacred species)

ಇತಿಹಾಸ ಪೂರ್ವದಲ್ಲಿ ಹಿಂದೂ ಜನಾಂಗ ಕೆಲವು ಪ್ರಾಣಿ ಪಕ್ಷಿಗಳನ್ನು ಮತ್ತು ಮರ ಗಿಡಗಳನ್ನು ದೈವಿಕ ಭಾವನೆಯಿಂದ ಗುರುತಿಸಿ ಸಂರಕ್ಷಿಸಿ ಆರಾದಿಸ ತೊಡಗಿದರು ಉದಾಹರಣೆಗಳೆಂದರೆ
೧.ತುಳಸಿ (Ocimum sanctum)
ಇದು ಅನೇಕ ಔಷದೀಯ ಗುಣಗಳನ್ನು ಹೋಂದಿದ್ದು ಇದನ್ನು ಲಕ್ಷ್ಮಿಯ ಅವತಾರವೆಂದು ಪೂಜಿಸಲಾಗುತ್ತದೆ ಸಂಪ್ರದಾಯಸ್ಥರ ಮನೆ ಅಂಗಳದಲ್ಲಿ ತುಳಸಿ ಇಂದಿಗೂ ಕಂಡುಬರುತ್ತದೆ.
೨.ಅಶ್ವತ, ಅರಳಿ ಮರ (Ficus religiosa)
ಇದು ಬೌದ್ದ ಮತ್ತು ಹಿಂದೂ ಧರ್ಮಿಯರಿಗೆ ಹಲವು ಕಾರಣಗಳಿಂದ ಪವಿತ್ರವಾದ ಮರವಾಗಿದೆ.  ಒಂದು ಕಾರಣವೆಂದರೆ ಇದು ಅನೇಕ ಜೀವ ಸಂಕುಲಕ್ಕೆ ಆಶ್ರಯವನ್ನು ನೀಡುತ್ತದೆ ಅಲ್ಲದೆ ಅಶ್ವತ ವೃಕ್ಷದ ಬಗೆಗಿನ ಬಹಳ ಉಲ್ಲೇಕಗಳು ವೇದಗಳಲ್ಲಿ ಕಾಣಸಿಗುತ್ತದೆ.
೩. ತೆಂಗಿನ ಮರ (Cocos nucifera)
ಕಲ್ಪವೃಕ್ಷವೆಂದೇ ಪ್ರಸಿದ್ಧವಾಗಿರುವ ಇದು ಧಾರ್ಮಿಕ ಆಚರಣೆಯಲ್ಲಿ ಮಹತ್ವದ ಪಾತ್ರವನ್ನು ಪಡೆದಿದೆ. ತೆಂಗಿನಕಾಯಿಯನ್ನು ದೇವಾಲಯಗಳಲ್ಲಿ ಅರ್ಚನೆಗಾಗಿ ಅಲ್ಲದೆ ತೆಂಗಿನ ಗರಿಗಳನ್ನು ಧಾರ್ಮಿಕ ವಿಧಿಗಳ ಸಂದರ್ಭದಲ್ಲಿ ಅಲಂಕಾರಕ್ಕಾಗಿ ಉಪಯೂಗಿಸಲಾಗುತ್ತದೆ.
೪. ಆಲದ ಮರ (Ficus benghalensis) , ಓಕ್ (Quercus suber), ಎಕ್ಕ (Calotropis), ಸಂಪಿಗೆ (Michelia champaka), ಗರಿಕೆ ಹುಲ್ಲು (Cynodon dactylon), ಬಿಲ್ವಪತ್ರೆ, ಕಹಿಬೇವು ಇತ್ಯಾದಿ.
೫.ಪ್ರಾಣಿಗಳಲ್ಲಿ ಮುಖ್ಯವಾಗಿ ಆನೆ, ಹಸು ಮತ್ತು ನಾಗರ ಇನ್ನೂ ಅನೇಕ ಪ್ರಭೇದಗಳನ್ನು ಭಯ, ಭಕ್ತಿಯಿಂದ ಕಾಣಲಾಗುತ್ತದೆ. ಗೋಮಾತೆಗೆ ಕಾಮದೇನು ಎಂದು ನಾಗರನಿಗೆ ಆಧಿಶೇಷನೆಂದು ಮಂಗನಿಗೆ ಹನುಮಂತನ ಅವತಾರವೆಂದು ಕರೆಯುವುದು ರೂಡಿಯಲ್ಲಿದೆ.

ದೇವರ ಕಾಡುಗಳು (Sacred groves)

ಈಗಿನ ರಕ್ಷಿತ ಅರಣ್ಯ ಬನಕಾಡು ಅಥವಾ ದೇವರಕಾಡಿಗೆ ಸಮಾನಾರ್ಥ ಆಗಬಹುದು ಆದರೆ ದೇವರಕಾಡು ಕೇವಲ ಸಂರಕ್ಷಿತ ಅರಣ್ಯವಾಗದೆ ಇನ್ನೂ ಅನೇಕ ಮಹತ್ವವನ್ನು ಪಡೆದಿದೆ. ಇದು ವಿಸ್ತೀರ್ಣದಲ್ಲಿ ಅಂದಾಜು ೧೦೦ ಚದರ ಅಡಿಗಳಿಂದ ಹಿಡಿದು ಕೆಲವು ಚದರ ಕಿ.ಮಿ ಗಳಷ್ಟು ಇರುತ್ತವೆ.  ದೇವರ ಕಾಡು ಸಾಮಾನ್ಯವಾಗಿ ದೇವರು ಮತ್ತು ದೇವಾಲಯಗಳನ್ನು ಒಳಗೊಂಡಿದ್ದು ಇಲ್ಲಿ ಆರಾಧನೆಯನ್ನು ಬಿಟ್ಟು ಇತರ ಯಾವುದೇ  ತರಹದ ಅನೈತಿಕ ಚಟುವಟಿಕೆಗಳನ್ನು ನಿಶೇಧಿಸಲಾಗಿರುತ್ತದೆ. ದೇವರ ಕಾಡುಗಳಿಗೆ ಬಳಕೆಯಲ್ಲಿರುವ ಇತರ ಹೆಸರುಗಳೆಂದರೆ ಪವಿತ್ರಕಾಡು, ಸುಗ್ಗೀದೇವರ ಬನ, ಪವಿತ್ರ ವನ, ನಾಗ ಬನ, ಬೂತಸ್ಥಾನ ಇತ್ಯಾದಿ. ಪುರಾತನ ಭಾರತೀಯ ಗ್ರಂಥಗಳಲ್ಲೊಂದಾದ ಕಾಳಿದಾಸನ ವಿಕ್ರಮೋರ್ವಷಿಯದಲ್ಲಿ ಇಂತಹ ದೇವರ ಕಾಡುಗಳಿಗೆ ಅನೇಕ ನಿದರ್ಶನಗಳು ದೊರಕುತ್ತವೆ.

ಒಂದು ಸಾವಿರ ಚದರ ಕಿ.ಮೀ ವಿಸ್ತೀರ್ಣವನ್ನು ತುಂಬ ಬಹುದಾದ ೧೭೦೦೦ಕ್ಕೂ ಮಿಗಿಲಾಗಿ ದೇವರ ಕಾಡುಗಳು ಭಾರತದ ವಿವಿದ ಅರಣ್ಯ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇವುಗಳು ಭಗವತ್ ಕಾರಯಕ್ಕೆ ವಿದಿವತ್ತಾಗಿ ಅರ್ಪಿಸಲಾಗಿದೆ.

ಇನ್ನು ನಮ್ಮ ಕರ್ನಾಟಕಕ್ಕೆ ಬಂದರೆ ಇಲ್ಲಿ ೧೫೦೦ಕ್ಕೂ ಹೆಚ್ಚು ವಿಸ್ತಾರವಾದ ದೇವರ ಕಾಡುಗಳಿದ್ದು ಇವುಗಳು ಸಹ್ಯಾದ್ರಿ ತಪ್ಪಲಿನಲ್ಲಿ ಕಾಣಸಿಗುತ್ತವೆ. ಕೊಡಗು ಜಿಲ್ಲೆಯೊಂದರಲ್ಲೆ ಒಟ್ಟು ೨೯೩ ರೆವೆನ್ಯು ಜಾಗದಲ್ಲಿ ೨೭೩ ದೇವರ ಕಾಡುಗಳಿವೆ.

ಕೇರಳದಲ್ಲಿ ೨೪೦ ದೇವರಕಾಡುಗಳಿದ್ದು ಅವುಗಳನ್ನು ಕಾವುಸ್ (Kavus) ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ವಿಸ್ತಾರವಾದ ಬನ ಇರಿಂಗೋಲ್ ಕಾವು (Iringole kavu) ಇದು ೨೦ ಹೆಕ್ಟೇರಿನಷ್ಟಿದೆ. ಹೆಚ್ಚಿನ ಕಾವುಗಳು ದೇವಸ್ಥಾನಕ್ಕೆ ಸಂಬಂಧ ಪಟ್ಟಿದ್ದು ಅನೇಕ ವಿನಾಶದ ಅಂಚಿನಲ್ಲಿರುವ ಪಶ್ಛಿಮ ಘಟ್ಟದ ಸಸ್ಯ ಪ್ರಭೇದಗಳನ್ನು ಔಷಧೀಯ ಗಿಡಗಳನ್ನು ಹೊಂದಿದೆ.

ಮಹಾರಾಷ್ಟ್ರದಲ್ಲಿ ದೇವರಕಾಡುಗಳನ್ನು ದೇವರೇಸ್ (Devarais) ಅಥವಾ ದಿಯೋರೇಸ್ (Deorais) ಎಂದು ಕರೆಯಲಾಗುತ್ತದೆ. ೨೫೦ ಕ್ಕೂ ಹೆಚ್ಚು ದೇವರ ಕಾಡುಗಳು ಪುಣೆ, ರತ್ನಗಿರಿ ಮತ್ತು ರಾಯ್‍ಗಡ್‍ದಲ್ಲಿ ಕಂಡುಬರುತ್ತವೆ.

ಇನ್ನು ಮೇಘಾಲಯದ ಕಾಶಿ ಬೆಟ್ಟಗಳಲ್ಲಿರುವ ಪ್ರತಿಯೊಂದು ಗ್ರಾಮಗಳಲ್ಲಿಯೂ ಒಂದೊಂದು ದೇವರ ಕಾಡುಗಳನ್ನು ಕಾಣಬಹುದು ಆದಕಾರಣ ಇಲ್ಲಿ ಅತೀ ಹೆಚ್ಚು ಜೀವವೈವಿದ್ಯತೆ ಉಳಿದುಕೊಂಡಿದೆ. ಹಿಮಾಲಯದ ಅನೇಕ ದೇವರ ಕಾಡುಗಳ ಬಗ್ಗೆ ಪುರಾಣದಲ್ಲಿಯ್ಯೂ ಉಲ್ಲೇಕಗಳಿವೆ.

ಇಂದಿನ ಸನ್ನಿವೇಶದಲ್ಲಿ ಹಳ್ಳಿಗಳು ಮತ್ತು ಬುಡಕಟು ಪ್ರದೇಶಗಳಲ್ಲಿರುವ ದೇವರ ಕಾಡುಗಳು ಮಾತ್ರ ಯಾವುದೇ ಹಾನಿಗೊಳಗಾಗದೆ ಉಳಿದಿದ್ದು  ನಶಿಸುತ್ತಿರುವ ಜೀವಸಂತತಿಯನ್ನು ರಕ್ಷಿಸುತ್ತಾ ಬಂದಿದೆ. ಆದುನೀಕರಣ, ಬದಲಾದ ಜೀವನ ಶೈಲಿ, ಸಂಪನ್ಮೂಲಗಳ ಅಭಾವ ಉದಾಹರಣೆಗೆ ಟಿಂಬರ್ ಬೇಡಿಕೆ, ಗಣಿಗಾರಿಕೆ ಮೊದಲಾದ ಕಾರಣಗಳಿಂದಾಗಿ ದೇವರಕಾಡುಗಳು ಇಂದು ವಿನಾಶದ ಅಂಚಿನಲ್ಲಿವೆ. ಸಂಪ್ರದಾಯಿಕ ಸಸ್ಯಪ್ರಭೇದಗಳ ಬದಲಿಗೆ ಇಂದು ಅಕೇಶಿಯಾ, ಮೇಫ್ಲವರ್‍‍ಗಳು ಬಂದು ಆಕ್ರಮಿಸಿಕೊಂಡಿವೆ.

ಪವಿತ್ರ ಸ್ಥಳ (Sacred landscapes)

ಸೇಕ್ರೆಡ್ ಲ್ಯಾಂಡ್ಸ್ಕೇಪ್ ವೈವಿದ್ಯಮಯವಾದ ಪ್ರದೇಶವಾಗಿದ್ದು  ಪ್ರಾಕೃತಿಕ ಮತ್ತು ಸಂಪ್ರದಾಯಿಕವಾಗಿ ಸಂರಕ್ಷಿತವಾದ ಜೀವಸಂಕುಲವನ್ನು ಒಳಗೊಂಡಿರುತ್ತದೆ. ಇದನ್ನು ಪ್ರಾಚೀನ ಅಥವಾ ಸಂಪ್ರದಾಯಿಕ ಜ್ಞಾನ ಭಂಡಾರ ಎನ್ನಬಹುದು.

ಹಿಮಾಲಯದ ಹೃದಯ ಭಾಗವಾದ ಗೋಮುಖದಿಂದ ಜನಿಸುವ ಗಂಗಾನದಿ ಮತ್ತು ಅದರ ದಡದಲ್ಲಿನ ಪ್ರದೇಶಗಳು ಈ ಪವಿತ್ರ ಸ್ಥಳಕ್ಕೆ ಒಂದು ಉತ್ತಮ ಉದಾಹರಣೆ. ಗಂಗೋತ್ರಿ, ಯಮುನೋತ್ರಿ, ಭದ್ರಿನಾಥ, ಕೇದರನಾಥ, ಋಷಿಕೇಶ, ಹರಿದ್ವಾರ, ಅಲಹಬಾದಿನ ಸಂಘಮ್, ವಾರಣಾಸಿ ಇವುಗಳೆಲ್ಲ ಗಂಗಾನದಿಯಿಂದ ರೂಪುಗೊಂಡ ಪವಿತ್ರ ಸ್ಥಳಗಳು.

ಪಶ್ಚಿಮ ಸಿಕ್ಕಿಮ್ಮಿನ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಪವಿತ್ರ ಸ್ಥಳಗಳಿದ್ದು ಡೆಮೋಜಾಂಗ್ (Demojong) ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ಟಿಬೆಟಿನ ಬೌದ್ಧ ತತ್ವಗಳ ತಳಹದಿಯನ್ನು ಹೊಂದಿದೆ. ಕಾಂಚನಗಂಗ ತಪ್ಪಲಿನಲ್ಲಿರುವ ಈ ಡೆಮೋಜಾಂಗುಗಳ ನೆಲ, ನೀರು, ವಾಯು ಎಲ್ಲವೂ ಪವಿತ್ರ ವೆಂಬ ಭಾವನೆಯಿದೆ ಇದಕ್ಕೆ ದಕ್ಕೆತರಬಹುದಾದ ಯಾವುದೇ ಬೃಹತ್ ಪ್ರಮಾಣದ ಮಾನವನ ಚಟುವಟಿಕೆಗಳಿಗೆ ಇಲ್ಲಿ ಆಸ್ಪದವಿಲ್ಲ ಆದರೆ ಸ್ಥಳೀಯರು ಇಲ್ಲಿ ವ್ಯವಸಾಯ ಮತ್ತು ಪಶುಸಂಗೋಪನೆಯನ್ನು ಯಾವುದೇ ಹಾನಿಯಾಗದಂತೆ ನೆಡೆಸಿಕೊಂಡು ಬಂದಿದ್ದಾರೆ.

ಕರ್ನಾಟಕದಲ್ಲಿನ ಮೂರು ಪ್ರಮುಕ ಪವಿತ್ರ ಲ್ಯಾಂಡ್ಸ್ಕೇ ಪ್ ಗಳೆಂದರೆ ಪಶ್ಚಿಮ ಘಟ್ಟದ ಕೊಡಚಾದ್ರಿ, ಬಿಳಿಗಿರಿ ರಂಗಸ್ವಾಮಿ ದೇವಾಲಯ ಮತ್ತು ಬಾಬಾ ಬುಡನ್ ಗಿರಿ.

This Article is based on 'Biodiversity' by MS Sudhakar Rao from his book 'Biology volume-2'.



ಚಿತ್ರ ದಲ್ಲಿ ಕಾಣುತ್ತಿರುವುದು ಬನಕಾಡ ಬಾಸಮ್ಮತಾಯಿ ಗುಡಿ, ಗುತ್ತಿ, ಮತ್ತು ದೇವರ ಮನೆ ಬೆಟ್ಟ ಮೂಡಿಗೆರೆ (ತಾ).

No comments:

Post a Comment