ಬಿರು ಬಿಸಿಲಿಗೆ ಬಿಸಿ ಉಸಿರುತ
ಬೆತ್ತಲೆ ನಿಂತಿಹ ಬೆಟ್ಟ ಬಯಲು
ಬಾಯಾರಿದ ಕಾಡ ಮೃಗ ಪಕ್ಷಿ
ಕಾಡ ಕೂಗಿಗೆ ಓಗೊಟ್ಟು
ಸರಿದನು ರವಿ ಪಡುವಣದಡಿ
ಕವಿಯಲು ಕಾರ್ಮೋಡ ಖಗದಲಿ
ಕಪ್ಪಾಯ್ತು ಕಾನನ ಮಂಜ ಮುಸುಕಿನಲಿ
ನಡುಗಲು ಎದೆ ಸಿಡಿಲು ಗುಡುಗಿಗೆ
ಮನೆ ದೀಪ ಮಂಕಾಯ್ತು ತಣ್ಣನೆ ಗಾಳಿಗೆ
ಗಕ್ಕನೆ ಕಾಣುತ ಪಕ್ಕನೆ ಕಣ್ಮರೆ
ಮಿಂಚಿನ ಬೆಳಕಲಿ ಕಾನನ ಮುಸುಕಲಿ
ಸೆಟೆಯಿತು ದರಗೆಲೆ ತಟಪಟ ಸದ್ದಲಿ
ಚಟ ಪಟ ಛಾವಣಿ ಹನಿಯಲು ಮಳೆಹನಿ
ಮಿಂದಿತು ಮಳೆಯಲಿ ಬೆತ್ತಲೆ ಕಾನನ
ಮಿಂದವು ಖಗ ಮಿಗ ಕಾನನ ದಡಿಯಲಿ
ಮಿಂದವು ಮೃಗಗಳು ಚಟ ಪಟ ಹನಿಯಲಿ
ಮುನಿಸಲು ಮನ ಬೆಚ್ಚಗೆ ಮಲಗಲು
ಅಂಗಳಕಿಳಿಯುತ ಮಳೆಯಲಿ ನೆನೆಯುತ
ತುಂತುರು ತಾಕಲು ತಣಿಯಿತು ತನು ಮನ
ನೋಡಲು ಹಿಂಬದಿ ಜೋಡಿಯೆ ಬಂದಿದೆ
ತಾನೂ ನೆನೆಯುತ ಬಾಲವ ಕುಣಿಸುತ
ತನ್ನನೆ ನೋಡುತ ಸುತ್ತಲು ಓಡುತ
ಮರಿ ನಾಯಿ ಬೆತ್ತಲೆ ನಿಂತಿದೆ ಚಳಿಯಲಿ
ಮೈಯನು ಕೊಡವುತ ಬಾಲವ ಕುಣಿಸುತ.
No comments:
Post a Comment