ॐ |
ಹನ್ನೆರೆಡೇ ಸಾಕು ನನ್ನೀ ಜೀವನ ಮುಕ್ತಿಗೆ
ಹೆಸರಿಲ್ಲದ ದೇವನಿಗೆ ಹೆಸರಿಟ್ಟವರು ನಾವೆ
ಹೆಸರಿಗಾಗಿ ಹೊಡೆದಾಡಿ ಸಾಯುವವರೂ ನಾವೆ
ತಿಳಿಯಲಾಗದನ್ನು ತಿಳಿಯಲು ಪ್ರಯತ್ನಿಸಿ
ಅವರ್ಣನೀಯವನ್ನು ವರ್ಣಿಸಿ
ಅದಲ್ಲ ಇದು, ಇದಲ್ಲ ಅದು ಎಂದು ಕಚ್ಚಾಡಿ
ತರ್ಕ, ತತ್ವ, ಧರ್ಮಗಳೆಂದು ಹೊಡೆದಾಡಿ ಕೊಂಡವರೂ ನಾವೆ
ಮನುಕುಲದ ಪುರಾತನ ಮಾಂಡೂಕ್ಯ ಹೇಳುತ್ತಿದೆ ಕೇಳಿ
"ನೀವು ಅರಿಯ ಹೊರಟದ್ದು ಅರಿಯಲಾಗದ್ದು
ಅರಿಯುವ ಒಂದೇ ಮಾರ್ಗ ನೀವೇ ಅರಿಯ ಪಡಬೇಕಾದ್ದು ಆದಾಗ"
"ನೀವೇ ಅವನಾದಾಗ ಅವನನ್ನು ನೀವು ಅಂದರೆ
ನಿಮ್ಮನ್ನು ನೀವು ತಿಳಿಯ ಬಹುದು"
"ಎಚ್ಚರ, ನಿದ್ದೆ, ಸುಪ್ತದಲ್ಲಿ ತೊಳಲಾಡುತ್ತ
ತುರಿಯವನರಿಯ ಹೊರಟವರಿಗೆ
ಓಂ ಎಂಬೀ ಅಕ್ಷರ ಒಂದೇ ದಾರಿ ದೀಪ"
"ಹೆಸರಿಲ್ಲದವನಿಗೆ ಓಂ ಎಂದು ಹೆಸರಿಸಿ
ಮೂರು ಅವಸ್ಥೆಗಳಿಗೆ ಮೂರು ಕಾರಗಳನ್ನು ಹೋಲಿಸಿ
ಅವಸ್ಥೆಯೇ ಅಲ್ಲದ ತುರಿಯವೂ
ಕಾರವೇ ಅಲ್ಲದ ಓಂ ಅಕ್ಷರವೂ ಒಂದೇ ಆಗಿ
ಇದ್ದೂ ಇಲ್ಲದೆ ಇರುವುದನರಿಯುವದೆಂತು?
ಅದೇ ತಾನಾಗದ ಹೊರತು"
~~~~~~~~ಓಂ~~~~~~~~~