Jul 18, 2014

ದುಡ್ಡೊಂದೇ ಅಲ್ಲ

IISC Bangalore

Jamsetji N Tata
ವರ್ಷ 'ಸಾವಿರದ ಎಂಟುನೂರ ತೊಂಬತ್ತ ಮೂರು' ಜಪಾನಿನಿಂದ ಹೊರಟ ಹಡಗು ಅಮೇರಿಕ ಮುಖಮಾಡಿ ಸಾಗರದಲ್ಲಿ ಸಾಗುತ್ತಿದೆ. ಈ ಹಡಗಿನಲ್ಲಿ ಒಂದು ಮುಖಾಮುಕಿ ಆಗಲಿದೆ, ತಿಳಿದರಿಯದ ಇಬ್ಬರು ಅಪರಿಚಿತರು ಆದರೆ ಭಾರತೀಯರೇ ಆದವರು. ಇವರ ಜೀವನ, ದ್ಯೇಯ ಬೇರೆ ಬೇರೆ. ಆದರೆ ಈ ಭೇಟಿ, ನಡೆದ ಮಾತು ಕತೆ ಮುಂದಿನ ಇಡೀ ಭಾರತದ ಗತಿಯನ್ನೇ ಬದಲಿಸಲಿದೆ. ಒಬ್ಬ ೫೪ ವಯಸ್ಸಿನ ಬಿಳಿಗಡ್ಡದ ಉದ್ಯಮಿ, ಈತ ಧನವನ್ನರಸಿ ಅಮೇರಿಕದೆಡೆಗೆ ಹೊರಟವನು, ಮತ್ತೋರ್ವ ೩೦ ರ ತರುಣ, ಜ್ಞಾನಿ, ಹಾಗು ಸನ್ಯಾಸಿ.  ಯುವ ಸಂತನ ಜೇಬಿನಲ್ಲಿ ಒಂದು ಮುಕ್ಕಾಲೂ ಹೆಚ್ಚಿಗೆ ಇಲ್ಲ, ಆದರೆ ಇವನಲ್ಲಿ ಕಂಡು ಬರುತಿದ್ದ ಚೈತನ್ಯ, ಗಹನವಾದ ಜ್ಞಾನನಿಧಿಗೆ ಸರಿಸಮಾನವಾಗಿ ಮತ್ತೊಂದು ಹೋಲಿಕೆ ಇರಲಿಲ್ಲ.  ಸನ್ಯಾಸಿಯ ದಿಟ್ಟ ನೋಟ, ತೊಟ್ಟ ನಿಲುವು, ಹೃದಯ ವಿಶಾಲತೆ ಉದ್ಯಮಿಯನ್ನು ತನ್ನೆಡೆಗೆ ಸೆಳೆಯುತ್ತದೆ. ನಂತರ ನಡೆದ ಮಾತು ಕತೆಯ ಕೊನೆಯಲ್ಲಿ ಸನ್ಯಾಸಿ ತನ್ನಲ್ಲಿದ ಹತ್ತು ರುಪಾಯಿಯನ್ನು ತೆಗೆದು ಉದ್ಯಮಿಯ ಕೈಗಿತ್ತು ಹೇಳುತ್ತಾನೆ "ಇದು ಈ ದಿನ ನನ್ನಿಂದ ಸಾಧ್ಯವಾಗುವ ದೇಣಿಗೆ ಇದು ನಿಮ್ಮ ಕಾರ್ಯಕ್ಕೆ ಬುನಾದಿಯಾಗಲಿ".

ಅಂದು ಪ್ರಯಾಣಿಸುತಿದ್ದ ಉದ್ಯಮಿ ಮತ್ತಾರು ಅಲ್ಲ 'ಜಮ್ಸೆಟ್ಜಿ ಎನ್. ಟಾಟ'. ಸಾಲ್ಟ್- ಟು -ಸಾಫ್ಟ್ವೇರ್ ಎಂದೇ ಹೆಸರಾದ ಜಗತ್ ವಿಕ್ಯಾತ ಟಾಟಾ ಕಂಪನಿಯ ಸಂಸ್ಥಾಪಕ. ಸನ್ಯಾಸಿಯ ನಿರ್ದೇಶನದಂತೆ ಮತ್ತು ದೇಣಿಗೆ ಇಂದ ನಿರ್ಮಾಣಗೊಂಡದ್ದೇ ಭಾರತದ ಹೆಮ್ಮೆಯ ವಿಶ್ವ ಪ್ರಖ್ಯಾತ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್'  ಜಮ್ಸೆಟ್ಜಿಯೆ ಇದರ ಸಂಸ್ಥಾಪಕ. ೧೯೦೯ ರಲ್ಲಿ  'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್' ನಿರ್ಮಾಣ ಗೊಂಡಿತ್ತು ಆದರೆ ಆ ಕನಸನ್ನು ಹೊತ್ತ ಯುವಕ ತನ್ನ ಕನಸು ನನಸಾಗುವಷ್ಟುಕಾಲ ಬದುಕಲ್ಲಿಲ್ಲ. ಆ ಸನ್ಯಾಸಿಗೆ ೧೮೯೮ ನವೆಂಬರ್ ೨೩ ರಲ್ಲಿ ಜಮ್ಸೆಟ್ಜಿ  ಒಂದು ಓಲೆಯನ್ನು ಕಳಿಸುತ್ತಾರೆ ಇದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೊಳ್ಳುವ ೧೧ ವರ್ಷಗಳ ಹಿಂದೆ.

ಆತ್ಮೀಯ ಸ್ವಾಮಿ ವಿವೇಕಾನಂದ,
ಜಪಾನ್ನಿಂದ ಚಿಕಾಗೊದೆಡೆಗೆ ನಿಮ್ಮೊಂದಿಗೆ ಪ್ರಯಾಣಿಸಿದ ಸಹಯಾತ್ರಿಯಾದ ನನ್ನ ನೆನಪು ನಿಮಗಿದೆ ಎಂದು ನಾನು ನಂಬುತ್ತೇನೆ. ಅಂದು ನೀವು ಹಂಚಿಕೊಂಡ ನಿಮ್ಮ ದೃಷ್ಟಿಕೋನ ಇಂದೂ ನನ್ನ ಕಣ್ಣಮುಂದಿದೆ. ಭಾರತೀಯ ತಪಸ್ವಿಗಳ, ಆತ್ಮದ ವಿಚಾರಗಳ ಗಹನವಾದ ವೀಕ್ಷಣೆಗಳು, ಮತ್ತು ಜ್ಞಾನವನ್ನು ಕೆಡಿಸದೆ ಸಮ್ರಕ್ಷಿಸುವುದು ಹಾಗು ಜೊತೆ ಜೊತೆಗೆ ಇಂದಿನ ಅವಶ್ಯಕತೆಗೆ ಅನುಗುಣವಾಗಿ ಅದರ ಶಕ್ತಿಯನ್ನು ಇತರ ಕ್ಷೇತ್ರಗಳಲ್ಲಿ ಹರಿಸು ಬಡತನವನ್ನು ನಿವಾರಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನಿಮ್ಮ ವಿಚಾರ ನನ್ನ ಒಳಹೊಕ್ಕಿದೆ...

ದಿನಾಂಕ: ೨೩ನೇ ನವೆಂಬರ್ ಇಸವಿ ೧೮೯೮

೪ ಜುಲೈ ೧೯೦೨ ರಲ್ಲೇ ನಮ್ಮನ್ನು ಬಿಟ್ಟು ಅಗಲಿದ್ದ ಕೇವಲ ೩೯ ವರ್ಷ ಬದುಕಿ ದಣಿವಿಲ್ಲದೆ ದುಡಿದ ಆ ಸನ್ಯಾಸಿಯೇ ಸ್ವಾಮಿ ವಿವೇಕಾನಂದ. ಜಮ್ಸೆಟ್ಜಿ ವಿವೇಕಾನಂದರನ್ನು ಬೇಟಿಯಾದದ್ದು ಇವರು ವಿಶ್ವ ಸರ್ವಧರ್ಮಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ವೇಳೆಯಲ್ಲಿ. ಭಾರತಕ್ಕೆ ಉಕ್ಕಿನ ಘಟಕವನ್ನು ತರುತ್ತೇನೆಂದು ಹೊರಟಿದ್ದ ಜಮ್ಸೆಟ್ಜಿಗೆ ವಿವೇಕಾನಂದರು ಉಕ್ಕು ಉತ್ಪಾದನ ಘಟಕವನ್ನು ಭಾರತದ ನೆಲದಲ್ಲಿ ಅನುಕರಿಸುವ ಜೊತೆ ಜೊತೆಗೆ, ಅಂತಹ ತಂತ್ರಜ್ಞಾನ ವನ್ನು ಇದೇ ನೆಲದಲ್ಲಿ ವಿನೂತನವಾಗಿ ಅಭಿವೃದ್ಧಿಪಡಿಸುವ, ಸಂಶೋದನೆಗಳನ್ನು ನೆಡೆಸುವ ಅನಿವಾರ್ಯತೆಗಳನ್ನು ಮನವರಿಕೆ ಮಾಡಿದರು. ವಿಜ್ಞಾನದ ಆವಿಷ್ಕಾರ ಗಳನ್ನು ನೆಡೆಸಲು, ದೇಶದ ಕೋಟಿಗಟ್ಟಲೆ ಜನರನ್ನು ಸ್ವಾವಲಂಬಿಗಳಾಗಿ ಮಾಡಲು, ಭಾರತೀಯ ವಿಜ್ಞಾನ ವಿಶ್ವವಿದ್ಯಾಲಯದ ಅವಶ್ಯಕತೆಯ ಅಭಿಪ್ರಾಯವನ್ನು ತಿಳಿಸಿದರು. ವಿವೇಕಾನಂದರಿಗೆ ಅಂದಿನ ಮೈಸೂರು ವಡಿಯರು ಸರ್ವಧರ್ಮಸಮ್ಮೇಳನದಲ್ಲಿ ಪಾಲ್ಗೊಳ್ಳವ ವೆಚ್ಚಕ್ಕಾಗಿ ನೀಡಿದ್ದ ಅಲ್ಪ ಧನ್ನೂ ಜಮ್ಸೆಟ್ಜಿಗೆ ದೇಣಿಗೆಯಾಗಿ ನೀಡಿದರು. ಮುಂದೆ  ಜಮ್ಸೆಟ್ಜಿಗೆ ವಿವೇಕಾನಂದರ ಈ ಮಾತುಗಳೆ ಪ್ರೇರಣೆಯಾಗಿ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್' ೧೯೦೯ ರಲ್ಲಿ ಬೆಂಗಳೂರಿನಲ್ಲಿ (ಅಂದಿನ ಮೈಸೂರು, ಇಂದಿನ ಕರ್ನಾಟಕ ರಾಜ್ಯ) ತಲೆ ಎತ್ತಿತು.

Swami Vivekananda
ಸ್ವಾಮಿ ವಿವೇಕಾನಂದರು ತನ್ನ ಜೀವಿತಕಾಲದಲ್ಲಿ ಇಂತಹ ಎಷ್ಟೋ ಮಹಾತ್ಮರಿಗೆ ಸ್ಫೂರ್ತಿ ಆಗಿದ್ದಾರೆ. ಈಗಲೂ ವಿವೇಕಾನಂದರ ಆದರ್ಶಗಳು ಪ್ರಸ್ತುತವಾಗಿವೆ ಮತ್ತು ಕೊಟ್ಯಾಂತರ ಯುವಕ, ಯುವತಿಯರನ್ನ ಹುರಿದುಂಬಿಸುತ್ತಿವೆ. ಒಬ್ಬ ವ್ಯಕ್ತಿ ತನ್ನ ಜೀವಿತಾವದಿಯಲ್ಲಿ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾಗಿಲ್ಲ. ಕೈಯಲ್ಲಿ ಹಣವಿಲ್ಲ, ಆರೋಗ್ಯ ಸರಿಯಿಲ್ಲ, ಜ್ಞಾನವಿಲ್ಲ ಎಂದು ನುಣುಚಿಕೊಳ್ಳುವ ಮತ್ತು ಇವತ್ತಲ್ಲ ನಾಳೆ ಎಂದು ಕೆಲಸವನ್ನು ಮುಂದೂಡುವ ಜನರಿಗೆ ಆ ನಾಳೆ ಬರುವುದೇ ಇಲ್ಲ. ಈ ದಿನ ಈ ಕ್ಷಣ ಬದುಕಿರುವುದೆ ನಮ್ಮ ಬಳಿ ಇರುವ ಅತಿದೊಡ್ಡ ಕೊಡುಗೆ. ಇವತ್ತು ಏನಿದೆಯೋ ಅದನ್ನು ನೀಡುವುದು, ಏನು ಸಾದ್ಯವೊ ಅದನ್ನು ನಿಸ್ವಾರ್ತದಿಂದ ಮಾಡುವುದೇ ನಮಗಿರುವ ದಾರಿ. ಯಾವುದಾದರು ಒಳ್ಳೆಯ ಕೆಲಸವನ್ನು ಮಾಡಬೇಕಿದ್ದಲ್ಲಿ ದುಡ್ಡೊಂದೇ ಅವಶ್ಯಕವಲ್ಲ ಒಳ್ಳೆಯ ಮನಸ್ಸು ಬೇಕಷ್ಟೆ. ಹೃದಯ ಶುದ್ದವಾಗಿದ್ದು ದ್ಯೇಯ ಉತ್ತಮವಾಗಿದ್ದರೆ ಉಳಿದವೆಲ್ಲ ತನ್ನಷ್ಟಕ್ಕೇ ತಾನೇ ಸರಿ ಹೊಂದುತ್ತವೆ ಇದು ಈ ಲೇಖನದ ತಾತ್ಪರ್ಯ.
ಚಿತ್ರ ಕೃಪೆ:
IISC - alumni.iisc.ernet.in
Jamsetji N Tata - en.wikipedia.org/wiki/Jamsetji_Tata
Swami Vivekananda - en.wikipedia.org/wiki/Vivekananda


No comments:

Post a Comment