Feb 24, 2014

ಬೆತ್ತಲೆ ಜೀವ

ಬಿರು ಬಿಸಿಲಿಗೆ ಬಿಸಿ ಉಸಿರುತ
ಬೆತ್ತಲೆ ನಿಂತಿಹ ಬೆಟ್ಟ ಬಯಲು
ಬಾಯಾರಿದ ಕಾಡ ಮೃಗ ಪಕ್ಷಿ
ಕಾಡ ಕೂಗಿಗೆ ಓಗೊಟ್ಟು
ಸರಿದನು ರವಿ ಪಡುವಣದಡಿ

ಕವಿಯಲು ಕಾರ್ಮೋಡ ಖಗದಲಿ
ಕಪ್ಪಾಯ್ತು ಕಾನನ ಮಂಜ ಮುಸುಕಿನಲಿ
ನಡುಗಲು ಎದೆ ಸಿಡಿಲು ಗುಡುಗಿಗೆ
ಮನೆ ದೀಪ ಮಂಕಾಯ್ತು ತಣ್ಣನೆ ಗಾಳಿಗೆ
ಗಕ್ಕನೆ ಕಾಣುತ ಪಕ್ಕನೆ ಕಣ್ಮರೆ
ಮಿಂಚಿನ ಬೆಳಕಲಿ ಕಾನನ ಮುಸುಕಲಿ

ಸೆಟೆಯಿತು ದರಗೆಲೆ ತಟಪಟ ಸದ್ದಲಿ
ಚಟ ಪಟ ಛಾವಣಿ ಹನಿಯಲು ಮಳೆಹನಿ
ಮಿಂದಿತು ಮಳೆಯಲಿ ಬೆತ್ತಲೆ ಕಾನನ
ಮಿಂದವು ಖಗ ಮಿಗ ಕಾನನ ದಡಿಯಲಿ
ಮಿಂದವು ಮೃಗಗಳು ಚಟ ಪಟ ಹನಿಯಲಿ

ಮುನಿಸಲು ಮನ ಬೆಚ್ಚಗೆ ಮಲಗಲು
ಅಂಗಳಕಿಳಿಯುತ ಮಳೆಯಲಿ ನೆನೆಯುತ
ತುಂತುರು ತಾಕಲು ತಣಿಯಿತು ತನು ಮನ
ನೋಡಲು ಹಿಂಬದಿ ಜೋಡಿಯೆ ಬಂದಿದೆ
ತಾನೂ ನೆನೆಯುತ ಬಾಲವ ಕುಣಿಸುತ
ತನ್ನನೆ ನೋಡುತ ಸುತ್ತಲು ಓಡುತ
ಮರಿ ನಾಯಿ ಬೆತ್ತಲೆ ನಿಂತಿದೆ ಚಳಿಯಲಿ
ಮೈಯನು ಕೊಡವುತ ಬಾಲವ ಕುಣಿಸುತ.





Feb 21, 2014

ಶಿಲ್ಪಿ-ಶಿಲ್ಪ

ಶಿಲ್ಪಿಯು ನೀನೆ ಶಿಲ್ಪವು ನೀನೆ
ವಿಶ್ವವ ಸೃಷ್ಟಿಪ ಶಿಲೆಯೂನೀನೆ
ಶೃತಿಯೂ ನೀನೆ ವೀಣೆಯು ನೀನೆ
ಶೃತಿಯೊಳು ಹೊಮ್ಮಿದ ನಾದವು ನೀನೆ
ಕಾರ್ಯವು ನೀನೆ ಕಾರಣ ನೀನೆ
ಕಾರ್ಯ ಕಾರಣದ ಕರ್ತೃವು ನೀನೆ
ನಿನ್ನೆಯು ನೀನೆ ನಾಳೆಯು ನೀನೆ
ನಿನ್ನೆ ನಾಳೆಗಳ ಸೇತುವೆ ನೀನೆ
ಅವನೂ ನೀನೆ ಅವಳೂ ನೀನೆ
ಇರುವುದೊಂದೆ ಅದು ನೀನೆ
ನಿನ್ನನೆ ಸೃಷ್ಟಿಸಿ ನೀನೇ ಹೊಕ್ಕು
ನಿನ್ನನೆ ಮರೆತವ ನೀನೆ.
ಜೀವವು ನೀನೆ ಜಡವೂ ನೀನೆ
ಜೀವ ಜಗ ಜಂಗಮವೆಲ್ಲವೂ ನೀನೆ

ನೀನೆ ನೀನೆ ನೀನೆ
ನಿನ್ನ ಬದುಕ ಬರೆದವ ನೀನೆ
ಬರಹ ಬದಲಿಸ ಬಲ್ಲವ ನೀನೆ
ಶಿಲ್ಪಿಯು ನೀನೆ ಶಿಲ್ಪವು ನೀನೆ.