Dec 4, 2013

ಓಟ

ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನಾನೊಂದು ಟ್ರ್ಯಾಕಿನ ಮೇಲಿದ್ದೆ
ಎಲ್ಲರೂ ಓಡುತ್ತಿರಲು ನಾನೂ ಓಡಿದೆ
ದಾರಿಯಲ್ಲಿ ಒಬ್ಬೊಬ್ಬರೆ ಕುಸಿದು ಬಿದ್ದರು
ಹಾಗೇ ಹೊಸಬರು ಹುಟ್ಟಿಕೊಂಡರು
ನೋಡುತ್ತಲೇ ಓಡತೊಡಗಿದರು
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.

ಅದೊಂದು ಗುಡ್ಡಗಾಡು ಓಟ.
ಸುತ್ತಲ ಸೌಂಧರ್ಯ ನಾನು ಸವಿಯಲಿಲ್ಲ.
ಬದಿಗೆ ಇದ್ದವರೊಡನೆ ಮಾತನಾಡಲು
ನನಗೆ ಸಮಯವೂ ಇರಲಿಲ್ಲ.

ನೋಡುತ್ತಲೆ ಕುಸಿದಳು ನನ್ನ ಹೆತ್ತವಳು.
ಓಡುತ್ತಲೆ ಕಣ್ಮರೆಯಾದರು ಒಡನಾಡಿಗಳು.
ಹುಟ್ಟುತಿದ್ದರು ಹೊಸಬರು ಕುಸಿಯುತಿದ್ದರು ಹಳಬರು.
ನಾನು ಓಡುತ್ತಲೇ ಇದ್ದೆ ಎಲ್ಲರೂ ಓಡುತ್ತಿರಲು.

ಅಂದು ನಾಹಾದ ದಾರಿಯಲ್ಲಿ
ಹಸಿರು ತುಂಬಿತ್ತು.
ತುಂತುರು ಉದುರುತಿತ್ತು.
ನಿಂತು ವಿಶ್ರಮಿಸಲಿಲ್ಲ.
ಹಣ್ಣು ಬಿದ್ದಿತ್ತು ಹೆಕ್ಕಿತಿನ್ನಲಿಲ್ಲ.
ಎಲ್ಲರೂ ನನ್ನೊಡನೆ ಇದ್ದರು
ಓಡುವುದ ಬಿಟ್ಟು ನಡೆಯ ಬಹುದಿತ್ತು
ನಡೆಯುತ್ತ ಹರಟ ಬಹುದಿತ್ತು.
ಅರಿವಿಗೇ ಬರಲಿಲ್ಲ.

ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನನ್ನವರು ನನ್ನ ಜೊತೆಗಿದ್ದರು
ಓಟನಿಲ್ಲಿಸಿ ನಡೆದು ಬರಬಹುದಿತ್ತು.
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.

[ಆಧುನಿಕ ಜಗತ್ತಿನಲ್ಲಿ ಯಶಸ್ಸಿನ ಬೆನ್ನಹತ್ತಿರುವ ನಮಗೆ ಆಪ್ತರ ಪ್ರೀತಿ ವಾತ್ಸಲ್ಯ ಎಷ್ಟೋಬಾರಿ ಗೋಚರಿಸುವುದಿಲ್ಲ.
ಅಮ್ಮ ಅಪ್ಪ ಅಜ್ಜಿ ಅಜ್ಜ ಗೆಳೆಯ ಗೆಳತಿಯರೊಡನೆ ಪ್ರೀತಿಯಿಂದ ಸಮಯ ಕಳೆಯಲು ನಮಗೆ ಸಾದ್ಯವಾಗುವುದಿಲ್ಲ.
ಕೊನೆಗೆ ಯಶಸ್ಸು ದಕ್ಕಿದರೂ, ಸಂತಸ ಹಂಚಿಕೊಳ್ಳಲು ಎಷ್ಟೋಬಾರಿ ಕಾರಣಕರ್ತರೆ ಬದುಕಿರುವುದಿಲ್ಲ.

ಈ ಗಳಿಗೆ ನೀವು ಟ್ರ್ಯಾಕಿನಲ್ಲಿ ಇದ್ದ ಪಕ್ಷ ಓಟನಿಲ್ಲಿಸಿ ನಿಮ್ಮವರೊಡನೆ ನೆಡೆಯುವುದು ಉತ್ತಮ.]

No comments:

Post a Comment