Dec 7, 2018

ಪ್ರೀತಿಯ ಕುಳ್ಳ

    ಕುಳ್ಳ ನಮ್ಮ ಮನೆಯವರಲ್ಲಿ ಒಬ್ಬ, ನಾಲ್ಕು ವರ್ಷಗಳ ಹಿಂದೆ ನನ್ನ ತಂಗಿ ತ್ರಿಪುರ ಚನ್ನಕೇಶವ ರವರ ಮನೆಯಿಂದ ಆ ಪುಟ್ಟ ಬುಲ್ಡಾಕ್ ನಾಯಿಮರಿಯನ್ನು ತಂದು ಕುಳ್ಳ ಅಂತಾ ಕರೆದಿದ್ದಳು. ಅಲ್ಲಿಂದ ಇಲ್ಲಿಗೆ ಕುಳ್ಳ ಮನೆಮಗನಂತೇ ಬೆಳೆದು ಮನೆಯ ಎಲ್ಲಾ ನೋವು ನಲಿವಿಗೆ ಬಾಗಿಯಾಗಿತ್ತು. ಪೇಟೆಯಿಂದ ಬಂದ ಅಪ್ಪನ್ನನ್ನು ವೆಲ್-ಕಮ್ ಮಾಡೋದು, ದನಗಳನ್ನು ಹಟ್ಟಿಗೆ ಕೂಡೊದು, ನಾವು ಕಾಫಿ ಕುಡಿದ್ರೆ ಬೇಡದಿದ್ದ್ರೂ ತನಗೂ ಬೇಕು ಅಂತಾ ಹಾಕಿಸಿಕೊಂಡು ಅಲ್ಲೇ ಉಳಿಸುವುದು ಆ ಮೇಲೆ ಬೈದೊಡನೆ ನೆಕ್ಕಿ ಬಿಡೋದು ಹೀಗೆ ಅದು ಆಡದ ಆಟವಿಲ್ಲ. ನಾನೂ ನನ್ನ ತಂಗಿ
ಕ್ಯಾಚ್ ಆಡ್ತ ಇದ್ರೆ ಬಾಲ್ ಬಿದ್ದಾಗ ಹೆಕ್ಕಿತಂದು ನಮ್ಮ ಗಮನ ಸೆಳೆದು ಒಂದು ಮುತ್ತು ಗಿಟ್ಟಿಸಿಕೊಳ್ಳದೆ ಬಿಡುತ್ತಿರಲಿಲ್ಲ.

    ನನಗೂ ನನ್ನ ತಂಗಿಗಿಂತಲೂ ಹೆಚ್ಚಿಗೆ ನನ್ನ ಅಪ್ಪ ಅಮ್ಮ ನೊಂದಿಗೇ ಅದು ಇದ್ದಿದು ಹೆಚ್ಚುಕಾಲ. ನಾನಾದರೂ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೆ, ನನ್ನ ತಂಗಿ ವಿದ್ಯಾಶ್ರೀ ಮೂಡಿಗೆರೆಯಲ್ಲಿ ಎಮ್.ಎಸ್ಸಿ ಓದುತಿದ್ದಳು ಹೀಗೆ ಅವಳು ಮನೆಗೆ ಬರುತಿದ್ದದ್ದು ಎರೆಡುವಾರಕ್ಕೊಮ್ಮೆ ನಾನಂತೂ ಬಹಳ ವಿರಳವೆ. ಅಂದು ತನ್ನ ತಾಯಿಂದ ಬೇರ್ಪಟ್ಟು ನನ್ನ ತಂಗಿಯೊಂದಿಗೆ ತಂದಿದ್ದ ಕುಳ್ಳ ಕ್ಯೂಟ್ ಆಗಿ ಒಂದು ಮುಷ್ಠಿಯಷ್ಟು ಗಾತ್ರವಿತ್ತು. ಇಂದು ಅಮ್ಮನ ಕೈಯಲ್ಲಿ ಹಾಲು-ಮೊಸರು, ಅಪ್ಪನ ಶಿಕಾರಿ ಮಾಂಸ ತಿಂದು ಬೆಳೆದು ಮುಷ್ಟಿ ಗಾತ್ರದಿಂದ ಮೂರಡಿ ಉದ್ದ ಬೆಳೆದಿದೆ ಆದರೆ ಎತ್ತರ ಅಷ್ಟೆ, ಅದೇ ಕುಳ್ಳ, ಅದೇ ಬುದ್ದಿ. ಎಸ್ಟೋ ದಿನ ಬಿಟ್ಟು ಮನೆಗೆ ಬರುವ ನನ್ನ ಗುರುತು ಸದಾ ಹಿಡಿಯುವ ಅದರ ಮನಸ್ಸಿನ ಪರೀದಿಯೇ
ನನಗೆ ಅರ್ಥವಾಗಿಲ್ಲ.

    ಮೊನ್ನೆ ಎಂದಿನಂತೆ ಬೆಳಿಗ್ಗೆ ಎದ್ದು ಕತ್ತಿ ಹಿಡಿದುಕೊಂಡು ಗುಡ್ಡದ ಕಾಫಿ ತೂಟಕ್ಕೆ ಹೊರಟೆ, ನಾನೂ ಬರುತ್ತೇನೆಂದು ಕುಳ್ಳನೂ ನನ್ನೊಂದಿಗೆ ಹೊರಟಿತು. ಇನ್ನೂ ಸರಿಯಾಗಿ ಬೆಳಕಾಗದ ಕಾರಣ ದೂರದಲ್ಲಿ ಕಾಡಿನ  ಪೊದೆಯಲ್ಲಿ ಅವಿತಿದ್ದ ಕರಡಿ ನನ್ನ ಗಮನಕ್ಕೆ ಬಂದಿರಲಿಲ್ಲ. ಅಂದು ಜೊತೆಗೆ ಕುಳ್ಳ ಇರದೆ ಹೋಗಿದ್ದರೆ ಅದು ಬೊಗಳದೆ ಹೋಗಿದ್ದರೆ ನನಗೊಂದು ಅಪಾಯ ಕಾದಿತ್ತು. ಚಾರ್ಜಿಗೆ ಹಾಕಿದ್ದ ಮೊಬೈಲ್ ಕೂಡ ಮನೆಯಲ್ಲೇ  ಬಾಕಿ ಇದ್ದ ಕಾರಣ ನನ್ನ ಕುಳ್ಳನೇ ಅಂದು ನನಗಿದ್ದ ಬಲ. ಅಲ್ಲಿ ಆ ದಿನ ಅರ್ದ ಗಂಟೆ ಹೊಳತೆಗೆಯುತಿದ್ದ ನನಗೆ ಹಾವೊದು ಕಂಡಿತು, ಹಿಂದಿನ ದಿನವೂ ಬೇರೊದು ಬಣ್ಣದ ಹಾವು ಅಲ್ಲೇ ಆಸು ಪಾಸಿನಲ್ಲಿತ್ತು. "ಅದನ್ನು ಹೊಡೆದು ಸಾಯಿಸು", "ಬಿಟ್ಟರೆ ಮುಂದೊಂದು ದಿನ ಕಚ್ಚೀತು", ಈ ಮಾತು ನನ್ನ ಮನಸಲ್ಲಿ ಬಂತು. "ಅದೇನು ಕಚ್ಚಿಲ್ಲ ವಲ್ಲಾ, ಸುಮ್ಮನೆ ಹೊಗುವ ಹಾವನ್ನೇಕೆ ಹೊಡೆಯುವುದು" ಹೀಗೆ ಅಂದು ಕೊಂಡು ಸುಮ್ಮನಾದೆ. ನಂತರ ಕೆಲವು ಸಮಯ ಅಲ್ಲೇ ಇದ್ದು ಮನೆಯಕಡೆ ಹಿಂದೆ ಬಂದೆ, ದಾರಿಯಲ್ಲಿ ಹಳ್ಳದಾಟುವಾಗ ಕುಳ್ಳ ಕಾಲು ಜಾರಿ ದಡಕ್ಕನೆ ನೀರಿಗೆ ಬಿದ್ದು ಮೇಲೆದ್ದಿತು, ಅದರಬಗ್ಗೆ ನಾನು ಅಸ್ಟೇನು ತಲೆಗೆಹಾಕಿ ಕೊಳ್ಳಲಿಲ್ಲ. ಮರುದಿನವೂ ಹೀಗೆಯೇ ಆದದ್ದು ನನ್ನ ಗಮನಕ್ಕೆ ಬಂತು "ಕುಳ್ಳನಿಗೆ ತಲೆ ತಿರುಗಿತೇ?", "ಕಣ್ಣು ಮಂಜಾಯಿತೆ? ಚೆನ್ನಾಗೇ ಇತ್ತಲ್ಲಾ? ಏನಾಯ್ತು" ಅಂದುಕೊಂಡೆ.

    ಮರುದಿನ ಕುಳ್ಳ ಊಟಮಾಡಲಿಲ್ಲ. ಹೀಗೆ ಊಟ  ಬಿಡುವುದು ತಿಂಗಳಿಗೊಮ್ಮೆ ಅದಕ್ಕೆ ಮಾಮೂಲಾಗಿದ್ದರೂ ಈ ಬಾರಿ ಅದರ ಮುಖದ ಕಳೆಗುಂದಿತ್ತು. "ಯಾಕೋ ಕುಳ್ಳ ಸಪ್ಪಗಿದ್ಯಲ್ಲಾ" ಅಂತ ಅಪ್ಪ ಕೇಳಿತು. ಏಕೋ ಯಾರಿಗೂ ಗೊತ್ತಿಲ್ಲ! ಅಷ್ಟೇ ಅಲ್ಲಾ ಇದ್ದಕ್ಕಿದ್ದಂತೆ ಮುಂಗಾಲನ್ನು ತುರಿಸಲು ಪ್ರಾರಂಬಿಸಿತು. ಮೈಗೇನಾದರು ಚಿಗುಟ ಹತ್ತಿರಬಹುದೆಂದು ನಾನು ಅಪ್ಪ ಸೇರಿ ಕುಳ್ಳನಿಗೆ ಸ್ನಾನ ಮಾಡಿಸಿದೆವು. ಆದರೂ ತುರಿಕೆ ನಿಲ್ಲಲಿಲ್ಲ. "ಕೊಳಕು ಮಂಡಲ ಹಾವು ಏನಾದ್ರು ಕಚ್ಚಿರಬಹುದಾ" ಅಂದುಕೊಂಡ್ರು ಅಮ್ಮ. ಈ ಹಿಂದೆ ಅಪರಿಚಿತ ನಾಯಿಯೊಂದು ಕಚ್ಚಿತ್ತು
ಅದಕ್ಕೆ ಹುಚ್ಚು ಹಿಡಿದಿರ ಬಹುದೇ ಎಂದು ಅಪ್ಪ ಅನುಮಾನಿಸಿದರು. ಕುಳ್ಳ ವಿಚಿತ್ರವಾಗಿ ವರ್ತಿಸುತಿತ್ತು ತುರಿಸಿಕೊಳ್ಳುವುದು ಒಂದು ಕಡೆಯಾದರೆ, ಮನೆ ಒಳಗೆ ಬರುವುದು ಕತ್ತಲಲ್ಲಿ ಇರಬಯಸುವುದು ಇನ್ನೊಂದು. ಆ ದಿನ ರಾತ್ರಿ ಏನನ್ನೂ ತಿನ್ನದೆ ಕುಳ್ಳ ಬೇರೆಡೆ ಮಲಗಲು ಹೋಗಿತ್ತು.
    
    ಮರುದಿನ ಬೆಳಗಾಯಿತು ಆದರೆ ಬಾಗಿಲಿನಲ್ಲಿ ಕುಳ್ಳ ಕಾಣಸಿಗಲಿಲ್ಲ "ಅಮ್ಮ ಕುಳ್ಳ ಎಲ್ಲಿ" ಎಂದೆ. "ಅಪ್ಪನ ಜೊತೆ ದನ ಬಿಡಲು ಗದ್ದೆಗೆ ಹೋಗಿರಬಹುದು" ಅಂದಿತು ಅಮ್ಮ. ಮರುಗಳಿಗೆ ಅಪ್ಪನೂ ವಾಪಾಸಾದರು "ಕುಳ್ಳ ಬಂದಿತ್ತಾ, ಡ್ಯಾಡಿ" ಅಂದೆ. "ಇಲ್ಲಾ" ಎಂಬ ಉತ್ತರ ಬಂತು. "ರಾತ್ರಿ ಊಟವನ್ನೂ ತಿಂದಿರಲಿಲ್ಲ. ಹಾಗಾದರೆ ಎಲ್ಲಿ ಹೋಯಿತು" ಎಂದುಕೊಂಡೆ. ಸುಮಾರು ಬೆಳಿಗ್ಗೆ 10 ಗಂಟೆ ಹೊತ್ತಿಗೆ ಅದು ನಿದಾನವಾಗಿ ಮನೆ ಕಡೆಗೆ ಅತ್ತಿ ಬರುವುದು ಕಂಡಿತು. ಕುಳ್ಳನ ಮೈಯಲ್ಲಿ ಬಲವಿರಲಿಲ್ಲ, ಕಂಣ್ಣು ಮಂಜಾಗಿದ್ದವು, ತುರಿಸಿಕೊಂಡಲ್ಲಿ ಗಾಯಗಳಾಗಿ ರಕ್ತ ಸೋರುತಿತ್ತು. ಕುಳ್ಳನನ್ನು ನೋಡಿದೊಡನೆ "ಬಾ ಕುಳ್ಳಾ ಬಾ" ಎಂದೆ. ಎರೆಡು ಹೆಜ್ಜೆ ಪ್ರೀತಿಯಿಂದ ಬಾಲ ಅಲುಗಾಡಿಸುತ್ತ ನನ್ನೆಡೆಗೆ ಬರಲು ಹೊರಟ ಕುಳ್ಳ ಯಾಕೋ ಹೆದರಿದಂತಾಗಿ ಹಿಂದೆಸರಿದು ಹೊರಟೇ ಬಿಟ್ಟಿತು. "ಕುಳ್ಳ ಕುಳ್ಳಾ" ಎಂದು ಎಷ್ಟೇ ಕರೆದರು ಕುಳ್ಳ ಹಿಂದಿರುಗಲಿಲ್ಲ. ಅದು ಎತ್ತ ಹೊಯಿತೊ ನಮಗೂ ತಿಳಿಯಲಿಲ್ಲ.

    "ಹುಚ್ಚು ಹಿಡಿದಾಗ ಸ್ನಾನ ಮಾಡಿಸಬಾರದಿತ್ತೇ? ನಾನು ಅಂದು ಆ ಹಾವಿಗೆ ಕನಿಕರ ತೋರಬಾರದಿತ್ತೆ? ಅದೇ ಹಾವು ಕಚ್ಚಿರಬಹುದೆ? ಮನೆಯಲ್ಲೇ ಪ್ರಾಣ ಬಿಡಬಹುದಿತ್ತಲ್ಲ? ಹುಚ್ಚು ಮನೆಯನ್ನೇ ಮರೆಸಿತೆ?
ಅಥವಾ ತಾನಿರುವ ಸ್ಥಿತಿಗೆ ಬೇಸರ ಗೊಂಡು ಕುಳ್ಳ ಹೊರಟೇ ಹೊಯಿತೆ? ಒಂದು ಹೆಣ್ಣು ನಾಯಿಯಾದರು ಇದ್ದಿದ್ರೆ ಕುಳ್ಳನ ಮರಿಗಳನ್ನಾದರು ಬೆಳೇಸಬಹುದಿತ್ತಲ್ಲ".
    
    "ಕುಳ್ಳ ಈ ಮನೆಗೆ ನೀನು ಮಾಡಿದ ಸೇವೆ, ನಾವಿಲ್ಲದಾಗ ಅಮ್ಮ ನೊಂದಿಗೆ ಜೊತೆಯಾಗಿದ್ದು, ಎಲ್ಲರಿಗೂ ಖುಷಿಯನ್ನೇ ಕೊಟ್ಟು ಪ್ರಾಮಾಣಿಕವಾಗಿ ಬದುಕಿದ ನಿನ್ನ ಸ್ವಾಮಿ ನಿಷ್ಟೆಗೆ ನಾವು ಎಂದೆಂದಿಗೂ ಋಣಿ"
07-12-2018
A photo with kulla in august 2018, taken by vidyashree

No comments:

Post a Comment